ಅಶ್ವತ್ಥ : -1912-94. ಪ್ರಸಿದ್ಧ ಕಥೆಗಾರರು. ಕೂದೂಳು ಅಶ್ವತ್ಥ ನಾರಾಯಣರಾಯ ಇವರ ನಿಜನಾಮ. ಅಶ್ವತ್ಥ ಎಂಬ ಕಾವ್ಯನಾಮದಿಂದ ಸಾಹಿತ್ಯಲೋಕದಲ್ಲಿ ಜನಪ್ರಿಯರಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಕೂದೂಳಿನಲ್ಲಿ 1912 ಜೂನ್ 16ರಂದು ಜನಿಸಿದರು. ತಂದೆ ಸೋಮಶೇಖರರಾವ್, ತಾಯಿ ಲಕ್ಷ್ಮೀದೇವಿ. ಈ ದಂಪತಿಗಳಿಗೆ ಅಶ್ವತ್ಥ ಮೂರನೆಯ ಮಗು. ಚಿಕ್ಕಂದಿನಲ್ಲಿಯೆ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆರೈಕೆಯಲ್ಲಿ ಬೆಳೆದರು. ಇವರ ಪ್ರಾಥಮಿಕ ವಿದ್ಯಾಭ್ಯಾಸ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೆರೆಗೋಡಿನಲ್ಲಿ ನಡೆಯಿತು. ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನ ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ನಡೆಯಿತು. ಶಾಲೆಯಲ್ಲಿ ಅತ್ಯಂತ ಬುದ್ಧಿವಂತ ಮತ್ತು ಚುರುಕಿನ ವಿದ್ಯಾರ್ಥಿಯಾಗಿದ್ದ ಇವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಪ್ರಥಮದರ್ಜೆಯಲ್ಲಿ ಪಾಸುಮಾಡಿದರು (1928). ಅನಂತರ ಆರ್ಥಿಕ ಸಂಕಷ್ಟದ ಕಾರಣದಿಂದ ಒಂದು ವರ್ಷ ಓದು ಮುಂದುವರಿಸಲಾಗಲಿಲ್ಲ. ಅನಂತರ ಪರಿಚಯದವರೊಬ್ಬರ ನೆರವಿನಿಂದ ಕಾಲೇಜು ಸೇರಿ ಎಂಜಿನಿಯರಿಂಗ್ ಪದವಿಯನ್ನು ಪ್ರಥಮ ರ್ಯಾಂಕಿನೊಂದಿಗೆ ಪಡೆದರು (1933). ಲಲಿತಮ್ಮ ಎಂಬುವರನ್ನು ವಿವಾಹವಾದರು (1935). ಮೊದಲಿಗೆ ಚಿಕ್ಕಮಗಳೂರಿನಲ್ಲಿ ಸರ್ವೇಯರ್ ಆಗಿ ಉದ್ಯೋಗಕ್ಕೆ ಸೇರಿದರು. ಆಗ ಇವರ ಸಂಬಳ ಕೇವಲ ಐವತ್ತು ರೂಪಾಯಿ. ಅನಂತರ ಎಂಜಿನಿಯರ್ ಹುದ್ದೆ ದೊರೆತು ಸಿಮ್ಲಾಕ್ಕೆ ಹೋದರು (1936). ಕೆಲಸದ ಪರಿಸರ ಇಷ್ಟವಾಗದೆ ಕೆಲವು ಸಮಯದ ಅನಂತರ ಆ ಹುದ್ದೆಗೆ ರಾಜೀನಾಮೆ ನೀಡಿದರು. ಮುಂದೆ ಬನಾರಸ್ನಲ್ಲಿ ಮಿಲಿಟರಿ ಎಕ್ಸ್‌ಟೆನ್ಷನ್ ಆಫೀಸರ್ ಆಗಿ ನೇಮಕ ಗೊಂಡರು. ಇದೇ ಸಂದರ್ಭದಲ್ಲಿ ಕೋಲ್ಕೊತ್ತದ ಮದನಮೋಹನ ಮಾಳವೀಯರ ವಿದ್ಯಾಸಂಸ್ಥೆ ಇವರ ಕರ್ತವ್ಯನಿಷ್ಠೆಯನ್ನು ಕಂಡು ಇವರನ್ನು ಆಹ್ವಾನಿಸಿತು. ಅಲ್ಲಿ ಎಂಜಿನಿಯರಿಂಗ್ ಅಧ್ಯಾಪಕರಾಗಿ ಹೆಸರು ಗಳಿಸಿದರು. ಇವರ ಶಿಸ್ತುಬದ್ಧ ನಡೆವಳಿಕೆ ಹಾಗೂ ಕರ್ತವ್ಯನಿಷೆವಿಗಳನ್ನು ಮದನಮೋಹನ ಮಾಳವೀಯರೂ ಮೆಚ್ಚಿಕೊಂಡಿದ್ದರು. ಸ್ವಯಂ ನಿವೃತ್ತಿಯ ಅನಂತರ ಮೈಸೂರಿನಲ್ಲಿ ನೆಲಸಿ ಸಾಹಿತ್ಯ ಕೃಷಿಯಲ್ಲಿ ತೊಡಗಿದರು. ಒಮ್ಮೆ ವಾಯುಸೇವನೆಗೆ ಹೋಗುವ ಸಂದರ್ಭದಲ್ಲಿ ವಾಹನ ಅಪಘಾತಕ್ಕೊಳಗಾಗಿ ಕಾಲುಮುರಿದುಕೊಂಡು ಗುಣಮುಖವಾಗದೆ 1994 ಜೂನ್ 12ರಂದು ನಿಧನಹೊಂದಿದರು. ಇವರಿಗಿದ್ದ ಒಬ್ಬ ಮಗ ಮುಂಬಯಿಯಲ್ಲಿ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯದಲ್ಲಿ ಉನ್ನತಾದಿsಕಾರಿಯಾಗಿದ್ದು, ಈಗ ನಿವೃತ್ತಿ ಹೊಂದಿದ್ದಾರೆ.

ಅಶ್ವತ್ಥರದು ಒಂದು ವಿಶಿಷ್ಟ ವ್ಯಕ್ತಿತ್ವ. ಅದರಲ್ಲಿ ನಿರೀಶ್ವರ ವಾದಿತನದ, ವಾಸ್ತವತೆಯಲ್ಲಿ ಮಾತ್ರ ನಂಬಿಕೆಯುಳ್ಳ ಛಲದಭಾವ ಕಂಡು ಬರುತ್ತಿತ್ತು. ಪ್ರಚಾರ, ಸಭೆ-ಸಮಾರಂಭ, ಸನ್ಮಾನ ಮೊದಲಾದ ಸಂಗತಿಗಳನ್ನು ಅವರು ನಿರಾಕರಿಸುತ್ತಿದ್ದರು.

ಅಶ್ವತ್ಥರು ತಾವು ಸತ್ತ ಅನಂತರ ತಮ್ಮ ಮನೆಯನ್ನು ರಾಮಕೃಷ್ಣ ಆಶ್ರಮ ವಹಿಸಿಕೊಳ್ಳಬೇಕು ಮಗನಿಗೇನಾದರು ಮನೆ ಬೇಕಾದರೆ ಅದರ ಬೆಲೆಯನ್ನು ಕೊಟ್ಟು ಬಿಡಿಸಿಕೊಳ್ಳತಕ್ಕದ್ದು ಎಂದು ಉಯಿಲು ಬರೆದು ತೀರಿಕೊಂಡಿದ್ದರು. ಅದರಂತೆ ಇವರ ಮಗ ಅನಂತರ ಆ ಮನೆಯನ್ನು ಬೆಲೆಕೊಟ್ಟು ಬಿಡಿಸಿಕೊಂಡರು. ಅಶ್ವತ್ಥರ ಸಾಹಿತ್ಯ ಸೃಷ್ಟಿ ಅಪಾರವಾದುದು. ಇವರು ಸುಮಾರು 180 ಕಥೆಗಳನ್ನು ಬರೆದಿದ್ದಾರೆ. ಈ ಎಲ್ಲ ಕಥೆಗಳು ಹದಿಮೂರು ಕಥಾ ಸಂಕಲನಗಳಲ್ಲಿ ಪ್ರಕಟಗೊಂಡಿವೆ. ದೂರದ ಕಾಳಿಯಲ್ಲಿ (1968), ಅಭಿನಯ ಜಗತ್ತು (1969), ದೀಪಾವಳಿಗೆ (1972), ಅಗ್ನಿಸಾಕ್ಷಿ (1973), ಮಹಾವಿಜಯ (1989), ಯದಾಯದಾಹಿ ಧರ್ಮಸ್ಯಃ (1990) - ಇವು ಕೆಲವು ಕಥಾಸಂಕಲನಗಳು. ಸಣ್ಣಕಥೆಗಳನ್ನಲ್ಲದೆ ಆರು ಕಾದಂಬರಿ, ಹದಿನೆಂಟು ನಾಟಕ, ಒಂದು ಪ್ರಬಂಧ ಸಂಕಲನ, ಒಂದು ಖಂಡಕಾವ್ಯವನ್ನೂ ಇವರು ರಚಿಸಿದ್ದಾರೆ. ಮುನಿಯನ ಮಾದರಿ (1949), ಮರ್ಯಾದೆ ಮಹಲು (1951), ಬರದ ಸಿರಿ (1965), ಹಂಬಲ (1968), ಅಜ್ಞಾತನ ನಂಜುಂಡಾಯಣ (1983), ರಂಗನಾಯಕಿ (1988) - ಇವು ಕೆಲವು ಕಾದಂಬರಿಗಳು. ಬಲಿ (1955), ನ್ಯಾಯಾಧೀಶ (1965), ಕ್ರಾಂತಿಕಾರಿ (1989), ಹುಚ್ಚ (1989), ಹೆಣ್ಣು (1989)-ಇವು ಇವರ ಕೆಲವು ನಾಟಕಗಳು. ಮಹಾಯುದ್ಧ (1962) ಒಂದು ಖಂಡಕಾವ್ಯ. ಇವರ ಈ ಎಲ್ಲ ಕೃತಿಗಳ ಹಿನ್ನೆಲೆಯಲ್ಲಿ ಬದುಕಿನ ಮೌಲ್ಯಗಳ ಹುಡುಕಾಟವಿದೆ.

ಅಶ್ವತ್ಥರು ಸಮಾಜದಲ್ಲಿ ಕಂಡುಬರುತ್ತಿದ್ದ ಕ್ರೌರ್ಯ, ಅನ್ಯಾಯ, ಅಧರ್ಮ, ದೌರ್ಜನ್ಯಗಳನ್ನು ಖಂಡಿಸುವ ಸಲುವಾಗಿ ತಮ್ಮ ಕಥಾ ಮಾಧ್ಯಮವನ್ನು ಬಳಸಿಕೊಂಡರು. ಸಮಾಜದ ದೀನ ದಲಿತರ, ಶೋಷಣೆಗೊಳಗಾದ ಸ್ತ್ರೀಯರ ಬಗೆಗೆ ಇವರಿಗಿದ್ದ ಪ್ರೀತಿ, ಅನುಕಂಪ ಈ ಕಥೆಗಳ ಮೂಲಕ ಅಭಿವ್ಯಕ್ತಗೊಂಡಿದೆ. ಸಮಾಜಮುಖಿಯಾದ ಚಿಂತನೆ ಇವರ ಸಾಹಿತ್ಯದ ಕೇಂದ್ರ ಆಶಯವಾಗಿ ಅರಳಿರುವುದನ್ನು ಕಾದಂಬರಿಗಳಲ್ಲಿ ನಾವು ಗುರುತಿಸಬಹುದು. ಹಂಬಲ ಇವರ ಮಹತ್ವಾಕಾಂಕ್ಷೆಯ ಕಾದಂಬರಿ. ಗಾಂಧೀಜಿಯವರ ಗ್ರಾಮ ಸಂಸ್ಕೃತಿಯ ನೆಲೆಯಿಂದ ಬರೆದಂಥದು. ವಾಸ್ತವ ಆದರ್ಶಗಳ ಸಂಘರ್ಷವನ್ನು ಇಲ್ಲಿ ಅತ್ಯಂತ ಆಪ್ತವಾಗಿ ಚಿತ್ರಿಸಲಾಗಿದೆ. ಇವರ ಕೆಲವು ಕಾದಂಬರಿಗಳು ಚಲನಚಿತ್ರಗಳಾಗಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ